ಅಂದು,ಸರ್ಪನ್ ಮೊದಲನೇ ಸಲ ತನ್ನ ಹಿಂದಿನ ಜೀವನದ ಕಡೆ ಒಂದು ಸಲ ಹಿಂದಿರುಗಿ ನೋಡಿದ್ದ.ಆಕಾಶದಲ್ಲಿ ಮೋಡ ಕವಿದಿತ್ತು.ಅವನ ಜೀವನದ ಕೆಲವು ಸನ್ನಿವೇಶಗಳಲ್ಲೂ ಸಹ ಕಾರಣಗಳಿಲ್ಲದೆ ಮಂಕು ಕವಿದಿತ್ತು.ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆ ಅವನಿಗೆ ಅನ್ಯಾಯ ಆಗಿತ್ತು.ಅದು ಓದಿಗೆ ಸಂಭಂಧಿಸಿದ,ಕೆಲಸಕ್ಕೆ ಸಂಭಂಧಿಸಿದ ಅನ್ಯಾಯವಾಗಿರಲಿಲ್ಲ.ತನ್ನ ಬಾಲ್ಯದಲ್ಲಿ ಆದ ಅನ್ಯಾಯ.ಅವನು ಬಾಲ್ಯದಲ್ಲಿ ಅನುಭವಿಸಬೇಕಾದಂಥದ್ದನ್ನು ಅನುಭವಿಸಿರಲಿಲ್ಲ.ಇದಕ್ಕೆ ಯಾರು ಕಾರಣ ಎಂಬುದೂ ಕೂಡ ಅವನಿಗೆ ತಿಳಿದಿರಲಿಲ್ಲ.....
ಮಳೆ ಜೋರಾಗುತ್ತಲೇ ಇತ್ತು.ಜೋರಾಗಿ ಒಂದು ಹನಿ ತಲೆಯ ಮೇಲೆ ಬಿತ್ತು.ಎಚ್ಚರನಾದವನಂತೆ ಮೇಲೆ ನೋಡಿದ.ಮಳೆ ಇನ್ನೂ ಬರುವ ಹಾಗೆ ಇತ್ತು.ಮನೆ ತಲುಪುವವರೆಗೂ ಮಳೆ ಜೊತೆಗಿರುತ್ತದೆ ಅಂದುಕೊಂಡ.ಎಂದಿಗೂ ತನ್ನ ಗಾಡಿಯಲ್ಲಿ ಹೋಗುತ್ತಿದ್ದವನು ಅಂದು ಒಬ್ಬನೇ ನಡೆದುಹೋಗುತ್ತಿದ್ದ....ಒಬ್ಬನೇ,ಒಂಟಿಯಾಗಿ ಹೋಗುತ್ತಿದ್ದ....
ಸರ್ಪನ್ ಗೆ ಒಂದು ಅಳುಕು ಇದ್ದದ್ದು ಏನು ಎಂದರೆ ತನಗೆ ಯಾರೂ ಇಂಥದ್ದು ಮಾಡು ಇದು ನಿನಗೆ ಒಳ್ಳೆಯದು ಎಂದು ಹೇಳಿದವರು ಇರಲಿಲ್ಲ.ಆಟವಾಗಲಿ,ಪಾಠವಾಗಲಿ ಅದೇನೇ ವಿಷಯವಾದರೂ ಕೂಡ ಸುತ್ತ ಮುತ್ತ ಪರಿಸರ ನೋಡಿಯೇ ಕಲಿತಿದ್ದ,ತಿಳಿದಿದ್ದ.ಅಥವಾ ಎಲ್ಲೋ ಓದಿ ಇಂಥದ್ದು ಮಾಡಿ ಪ್ರಯೋಜನವಾಗಬಹುದೇನೋ ಎಂಬ ನಂಬಿಕೆ ಇಂದ ಮುಂದುವರೆಯುತಿದ್ದ.ಆದರೂ ಅವನಿಗೆ ಒಂದು ನೆಮ್ಮದಿಯ ಸಂಗತಿಯಿತ್ತು ಅದೇನೆಂದರೆ ಹಾಗೆ ಯಾರೂ ತನಗೆ ಏನೂ ಹೇಳದೆ ಇದ್ದದ್ದರಿಂದ ಸ್ವಂತವಾಗಿ ವಿಷಯವನ್ನು ಪರಾಮರ್ಶಿಸಲು ಕಲಿತಿದ್ದ.
ಕೊಂಚ ಜೋರಾಗಿ ಸಿಡಿಲು ಹೊಡೆಯಿತು.ಬೆಚ್ಚಿ ಬಿದ್ದ,ಸರ್ಪನ್.ನಿಂತುಕೊಳ್ಳುವ ಅವಶ್ಯಕತೆ ಇದೆಯೇನೋ ಎಂದು ನೋಡಿದ.ಇಲ್ಲ ಎನಿಸಿತು ಅವನಿಗೆ.ತನ್ನ ದೇಹವನ್ನು ನೋಡಿಕೊಂಡ.ಪೂರ್ತಿ ಮಳೆಯಲ್ಲಿ ನೆನೆದಿದ್ದ.ಇನ್ನು ನಿಂತು ಪ್ರಯೋಜನವಿಲ್ಲ ಎನಿಸಿತು ಅವನಿಗೆ.ಇನ್ನು ಒಂದು ರಸ್ತೆ ದಾಟಿದರೆ ಮನೆ ಸಿಗುತ್ತಿತ್ತು.ಸರ್ಪನ್,ಜೀವನದಲ್ಲಿ ಎಂದೂ ನಿಂತವನಲ್ಲ.ಯಾವುದಕ್ಕೂ ಹೆಚ್ಚಾಗಿ ಯೋಚನೆ ಮಾಡಿದವನಲ್ಲ.
ಆಜ್ಞೆ,ಸಲಹೆ......ಏಕೆ ಯಾರೂ ತನಗೆ ಕೊಡಲಿಲ್ಲ ಎಂದು ಯೋಚಿಸುತ್ತಿದ್ದ.ಮನೆಯಲ್ಲಿ ಚಿಕ್ಕವನಿದ್ದಾಗ ಸುಮ್ಮನೆ ಕೂತಿದ್ದಾಗಲು ಅಪ್ಪ ಗದರಿರಲಿಲ್ಲ.ತಾನು ಕಷ್ಟ ಪದಬಾರದಂತಲೋ,ಅಥವಾ ನೋಡಿ ತಿಳಿಯಲಿ ಅಂತ ಬಿಟ್ಟರೋ ಅಪ್ಪ ಎಂದು ಆಯ್ಕೆಯಿಂದ ಉತ್ತರ ಹುಡುಕಲು ಪ್ರಯತ್ನಿಸಿದ.ಅದೆಲ್ಲ ಮಾಡುವುದಕ್ಕೆ ವಯಸ್ಸು ಚಿಕ್ಕದು.ಒಂದು ಮಾತು ಹೇಳಬೇಕಿತ್ತು,ಅಪ್ಪ ಎಂದುಕೊಂಡ.
ಮಿಂಚೊಂದು ಫಟಾರ್ ಎಂದು ಹೊಡೆಯಿತು..ಜ್ಞಾನೋದಯವಾದಂತಾಗಿ ಮನೆ ಹತ್ತಿರ ಬರುತ್ತಿದ್ದನ್ನು ಗಮನಿಸಿದ.ಇಂದು ಆ ಮನೆಯಲ್ಲಿ ಯಾರೂ ಇಲ್ಲ.ತಾನೊಬ್ಬನೇ.ಅವತ್ತಿಗೆ,ಅವನು ಎಲ್ಲರನ್ನೂ ಕಳಿಸಿಕೊಟ್ಟಿದ್ದ.ಅಂದು ಅವನ ತಂದೆಯನ್ನು ಕಳುಹಿಸಿ ಬಂದಿದ್ದ.ಕೊನೆ ಮಾತಂದಿದ್ದರು ಅಪ್ಪ,"ಕ್ಷಮಿಸು,ಹಿಂದಿರುಗಿ ನೋಡಬೇಡ"ಅಂತ.ಆದರೆ,ಮನುಷ್ಯ ಸ್ವಭಾವ ನೋಡಿದ್ದ,ಸರ್ಪನ್.
ಹೀಗೆ,ಯೋಚನೆ ಮಾಡುತ್ತಾನೆ ಮನೆ ಒಳಗೆ ಹೋಗಿ ಅಪ್ಪನ ಭಾವಚಿತ್ರದ ಮುಂದೆ ನಿಂತ,ಸರ್ಪನ್.
ಮಳೆ ನಿಲ್ಲಿತು.ಸರ್ಪನ್,ಹಿಂದಿರುಗಿ ನೋಡುವುದನ್ನೂ ನಿಲ್ಲಿಸಿದ.ಮುಂದೆ ಹೊರಡಲು ಅನುವಾದ.ಅವನು ಸಿಗದ ಉತ್ತರಕ್ಕಾಗಿ ಹಿಂದೆ ಹೋಗಿದ್ದ.....ಮುಂದೆ ಹೊರಟ ಉತ್ತರವುಳ್ಳ ಬಾಳನ್ನು ಬಾಳುವುದಕ್ಕೆ.....