Thursday, November 26, 2009

"ಮನೆ ಬಿಟ್ಟು ಹೋಗುವ ಸಮಯ ಬಂದಿದೆ.ಹೊರಡ್ತೀನಿ".

ಎಂದು ತನ್ನ ಡೈರಿಯಲ್ಲಿ ಬರೆದು ಮುಚ್ಚಿಡುತ್ತಾಳೆ.ಜೀವನದ ಅತ್ಯಂತ ಮುಖ್ಯವಾದ,ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಳು.ಕಷ್ಟಗಳನ್ನು,ಅವಮಾನಗಳನ್ನು,ಮನುಷ್ಯ ಒಂದು ಮಟ್ಟದವರೆಗೂ ತಡೆದುಕೊಳ್ಳಬಲ್ಲ.ಮಿತಿ ಮೀರಿದರೆ,ತನ್ನ ಸುತ್ತಮುತ್ತಲಿನವರ ಮೇಲೆ ವಿಚಿತ್ರ ಕೋಪ,ರೋಷ ಮೂಡುತ್ತವೆ.ಆದ್ದರಿಂದ,ದೇವಮನೋಹರಿ ಅಂಥ ನಿರ್ಧಾರವನ್ನು ತೆಗೆದುಕೊಂಡಳು.ಆದರೂ,ಅವಳ ಮನಸ್ಸಿನ ಮೂಲೆಯಲ್ಲೊಂದು ಆಸೆ,ಎಲ್ಲವೂ ಇನ್ನೊಂದು ದಿನದಲಿ ಸರಿಹೋಗಬಹುದೆಂದು,ತಂದೆ-ತಾಯಿಗಳು,ತನ್ನನ್ನು ಅರ್ಥ ಮಾಡಿಕೊಳ್ಳಬಹುದು ಎಂದು.ಆ ಆಸೆ,ನಂಬಿಕೆಯಿಂದಲೇ ಮನುಷ್ಯ ಜೀವನ ಸಾಗಿಸುವುದಲ್ಲವೇ?ಆದರೆ, ಅದೇ ಮನಸ್ಸು,ಇಷ್ಟು ವರ್ಷಗಳು ತನ್ನನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು,ತಮ್ಮ ಮನಸ್ಸಿಗೆ ತಕ್ಕಂತೆ ಇರಬೇಕೆಂದು ಬಯಸಿದವರಿಗೆ ಒಂದು ದಿನದಲ್ಲಿ ವಿಶ್ವಾಸ ಹುಟ್ಟೀತೆ? ಎಂಬ ಪ್ರಶ್ನೆ.

ಸಂಜೆಯ ವಿಹಾರಕ್ಕೆ ಹೊರಡುವ ಸಮಯ.ಪ್ರಾಣಿಗಳು,ಮನುಷ್ಯರು,ಎಲ್ಲರೂ ತಮ್ಮ ಗೂಡಿಗೆ ಸೇರಿಕೊಳ್ಳುತ್ತಿದ್ದಾರೆ.ನಾಳೆ,ನಾನು ನನ್ನ ಗೂಡನ್ನು ಶಾಶ್ವತವಾಗಿ ಬಿಡುತ್ತೇನೆ,ಇಷ್ಟು ಹೊತ್ತಿಗೆ,ಎಂದುಕೊಳ್ಳುತ್ತಾಳೆ.ದಾರಿಯಲಿ "ಯಾವ ಮೋಹನ ಮುರಳಿ" ಹಾಡು ರೇಡಿಯೋನಲ್ಲಿ ಬರುತ್ತಿರುವುದು ಕೇಳಿಸುತ್ತದೆ.ಅದರ ಕೊನೆಯ ಸಾಲು,"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ".ಜಿಜ್ಞಾಸೆ ಹುಟ್ಟಿತು,ದೇವಮನೋಹರಿಗೆ.ನನ್ನ ಈ ಜೀವನದಲ್ಲಿ ಇರುವುದಾದರೂ ಏನು?ಸುಖವೇ?ಶಾಂತಿಯೇ?ಪ್ರೀತಿ-ವಿಶ್ವಾಸದ ಕುರುಹು ಇಲ್ಲದೆ ಅಪರಿಚಿತರಂತೆ ವರ್ತಿಸುವ ತಂದೆ ತಾಯಿಗಳು.ಅಣ್ಣ-ತಮ್ಮಂದಿರಿಲ್ಲ,aಕ್ಕ-ತಂಗಿಯರಿಲ್ಲ,ಇರುವುದೆಲ್ಲ ತಂದೆ-ತಾಯಿಗಳು.ಆದರೆ,ಎಂಥಾ ದುರಾದೃಷ್ಟ!ಏಕೆ ಹೀಗೆ ಇಂಥ ದಾರುಣ ಪರಿಸ್ಥಿತಿ.ನಾನು ಹೆಣ್ಣು,ದಾರಿ ತಪ್ಪುತ್ತೇನೆ ಎಂದು ಅತಿ ಅಧಿಕಾರವನ್ನು ಸ್ಥಾಪಿಸುತ್ತಿದ್ದಾರೆಯೇ?ಆ ಒಂದು ಅಬಿಪ್ರಾಯ ಬರುವಂತೆ ನಾನೆಂದೂ ನಡೆದುಕೊಂಡಿಲ್ಲ.ಆದರೂ ಎಂಥಾ ಶಿಕ್ಷೆ.ಈ ಮಧ್ಯದಲ್ಲಿ ಸ್ನೇಹಿತರ ಜೊತೆಯೂ ಮಾತಾಡುವಂತಿಲ್ಲ.ಹೀಗಿರುವಾಗ ನಾನು ಯಾವುದನ್ನು ಬಿಟ್ಟು ಹೋಗುತ್ತಿಲ್ಲ. ಅಸಲಿಗೆ ನಂಗೆ ಏನೂ ಇಲ್ಲ,ಎಂದುಕೊಳ್ಳುತ್ತಾಳೆ.

Life is beautiful. ಎಂಬುದನ್ನೂಮಾಡಿಕೊಳ್ಳುವುದೇ ಕಷ್ಟ ಎಂಬುವ ಹಾಗಿತ್ತು ಅವಳ ಯೋಚನಾಲಹರಿ.ಜೀವನದ ಘಟನೆಗಳು,ಅವಳನ್ನು ಹೃದಯಹೀನಳನ್ನಾಗಿ,ಯಾವುದೇ ಆಶೆ-ಆಕಾಂಕ್ಷೆಗಳನ್ನು ಇಟ್ಟುಕೊಳ್ಳದಂತೆ ಮಾಡಿದ್ದವು.ಜಗತ್ತನ್ನು ಪ್ರೀತಿಸುವ ಶಕ್ತಿಯನ್ನು,ಅದು ತನ್ನನ್ನು ಪ್ರೀತಿಸಬಹುದು ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದಳು.ಹೆತ್ತವರೇ ಹತ್ತಿರವಿಲ್ಲ,ಇನ್ನು ಅಪರಿಚಿತರು ಹೇಗಿರುವರು?ಎಂಬ ಭಯ.ಭಯಗಳೇ ಕಪ್ಪು ಮೋಡಗಳಾಗಿ ಆಕಾಶದಲ್ಲಿ ಮೂಡಿದ್ದವು.ಆ ಕಪ್ಪು ಮೋಡಗಳು,ಆಕಾಶಕ್ಕೆ ಭಾರವಾದಂತೆ,ತೂಗಿ ಬೀಳುವ ಹಾಗೆ ಕಂಡಿತು,ದೇವಮನೋಹರಿಗೆ,ಹೇಗೆ ತನ್ನ ಮನಸ್ಸೂ ಕೂಡ,ಪ್ರಶ್ನೆ,ಅನುಮಾನಗಳಿಂದ ಬಗ್ಗಿ ಬಾಡಿ ತುಗುತ್ತಿದೆಯೋ ಹಾಗೆ.

ಎಂದೂ ವಿರುದ್ಧದ ಕೆಲಸ ಮಾಡಿರದವರಿಗೆ ಭಯ ಆತಂಕಗಳು ಮೂಡುವುದು ಸಹಜ.ದೇವಮನೋಹರಿಗೂ ಆದದ್ದು ಹಾಗೆ.ಮನಸ್ಸಲ್ಲಿ ತುಮುಲ,ಏನೋ ಗೊಂದಲ,ಪ್ರಶ್ನೆ.ತಾನು ಮಾಡುತ್ತಿರುವುದು ಸರಿಯೇ?ಅವರು ತಂದೆ-ತಾಯಿಗಳು.ತನ್ನ ಮೇಲೆ ಅವರಿಗೆ ಅಧಿಕಾರವಿದೆ.ತಾನು ಹೀಗೆ ಮನೆ ಬಿಟ್ಟು ಹೋಗುವುದರಿಂದ,ಅವರಿಗೆ ನೋವಾಗುವುದಿಲ್ಲವೇ?ತಾನವರಿಗೆ ಮಾಡಿರುವುದಾದರೂ ಏನು?ಆದರೆ ಆದರೆ..ನನ್ನ ಗತಿ ಏನು?ನಾನೆಷ್ಟು ಹಿಂಸೆ ಅನುಭವಿಸುತ್ತಿದ್ದೇನೆ.ಪೋಷಕರಾಗಿ ಅವರಿಗೆ ನನ್ನ ಮೇಲೆ ಹಕ್ಕಿದ್ದರೆ,ಮಗಳಾಗಿ ತನಗೆ ಪ್ರೀತಿ-ವಿಶ್ವಾಸವನ್ನು ಅಪೇಕ್ಷಿಸುವ ಅಧಿಕಾರವಿದೆಯಲ್ಲವೇ?ಉಹೂ,ಇನ್ನು ದ್ವಂದ್ವಗಳಲ್ಲಿ ಅರ್ಥವಿಲ್ಲ.ದಾರಿ ಇಲ್ಲಿಗೆ ಮುಗಿದಿದೆ.ತಿರುವು ತೆಗೆದುಕೊಳ್ಳಬೇಕು.ಆ ತಿರುವಲ್ಲಿ ಹೊಸದೇನು ಇಲ್ಲ.ಅದು ಬೇರೆಯ ಜಗತ್ತಿಗೆ ದಾರಿ,ತನ್ನನ್ನು ತಾನು ಕಳೆದುಕೊಳ್ಳುವುದಕ್ಕೆ ದಾರಿ,ಎಂದು ಕೊಂಡು ಮನೆಯಿಂದ ಹೊರಬೀಳುತ್ತಾಳೆ.

ದೂರದ ಊರಿಗೆ ವಾಹನ ಹತ್ತುತ್ತಾಳೆ.ಅದ್ಭುತ ಬೆಳಕು ನೀಡುತ್ತಿರುವ ಸೂರ್ಯ,ಆಹಾರ ಹುಡುಕಾಟದಲ್ಲಿರುವ ಪ್ರಾಣಿ-ಪಕ್ಷಿಗಳು,ಇಳಿಯುವ ಸ್ಥಳದವರೆಗೂ ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜನರು.ತನಗೆ ಏನೊಂದೂ ದಾರಿ ಇರದೇ ಹೋಯಿತಲ್ಲ ಎಂದುಕೊಳ್ಳುತ್ತಾಳೆ.ಹೆಸರು ತಿಳಿಯದ ದೂರದ ಊರಲ್ಲಿ ಇಳಿಯುತ್ತಾಳೆ.ಇಳಿದವಳೇ ಸುಮ್ಮನೆ ನಡೆಯಲು ಶುರುಮಾಡುತ್ತಾಳೆ.ರಾತ್ರಿ,ಬೆಳಗೂ ನಡೆದು ಯಾವುದೋ ನಿರ್ಜನ ಪ್ರದೇಶಕ್ಕೆ ಬರುತ್ತಾಳೆ.

ಬಾಡಿದ ಮುಖ,ಕೆದರಿದ ಕೂದಲು,ನಿದ್ದೆ ಇಲ್ಲದೆ ಕೆಂಪಾಗಿರುವ ಕಣ್ಣುಗಳು,ಧೂಳಿನ ಬಟ್ಟೆ,ನಿದ್ದೆಯಲ್ಲಿ ನಡೆದಂತೆ ನಡೆಯುತ್ತಿದ್ದಳು.ಎಲ್ಲಿ ಹೋಗುತ್ತಿದ್ದಳೋ ಅವಳಿಗೆ ತಿಳಿಯದು.ಎಲ್ಲೋ ಸುಮ್ಮನೆ ಕೂತು ಅಳುತ್ತಿದ್ದಳು.ರಾತ್ರಿ ಕವಿದಿತ್ತು.ಬೀಸುವ ಗಾಳಿ,ಚುಲ್ಲಿಯಂತೆ ನಕ್ಷತ್ರಗಳು,ಹಾಗೆಯೇ ರಸ್ತೆಯ ಬದಿಯಲ್ಲಿ ಮಲಗುತ್ತಾಳೆ.ಪಯಣಿಗ ಸುಸ್ತಾಗಿದ್ದಾನೆ.ತ್ರಾಣವಿಲ್ಲ.ಮುಂದೆ ಹೋಗುವ ಮನಸ್ಸಿಲ್ಲ.ಹೋದರೂ ಅಲ್ಲಿ ತನಗೆ ಯಾವ ಕೆಲಸವೂ ಇಲ್ಲ.ಮಲಗಿದಲ್ಲೇ ವಿರಮಿಸಿದ.ಲೋಕಕ್ಕೆ ತನಗೆ ಇಷ್ಟು ದಿನ ಆಶ್ರಯ ಕೊಟ್ಟಿದ್ದಕ್ಕೆ ವಂದಿಸಿದ.ಮರಳಿ ಉತ್ತಮವಾದ ಜನ್ಮ ಕೊಡುವಂತೆ ಪ್ರಾರ್ಥಿಸಿದ.ಮುಚ್ಚಿದ ಕಣ್ಣು ಶಾಹ್ಸ್ವತವಾಗಿ ಮುಚ್ಚಿತು.ಕಷ್ಟ ಕೋಟಲೆಗಳು ಅಲ್ಲಿಗೆ ಮುಗಿದವು.ಸರಿ-ತಪ್ಪುಗಳು,ಬುದ್ಧಿವಂತಿಕೆ-ಮೂರ್ಖತನ ಯಾವುದರಿಂದಲೂ ಅಳೆಯಲಾಗದಂಥ ಪರಿಸ್ಥಿತಿ.ಅನಾಥವಾಗಿ ಬದುಕಿದ ಜೀವ,ಅನಾಥವಾಗಿಯೇ ಲೀನವಾಯಿತು.ಅಳುವರಿಲ್ಲ.ಸಂತಾಪವಿಲ್ಲ.ದೇವಮನೋಹರಿ ಪ್ರಕೃತಿಯ ರಾಗಕ್ಕೆ ಸೇರಿಕೊಂಡಳು.ವಂಚಿತ ಹೆಣ್ಣು ಮಗಳು.

Saturday, September 26, 2009

ಸಂಜೆಗವನ

[ತಮ್ಮದೇ ಲೋಕದಲ್ಲಿ ಇದ್ದ ಆ ಯುವ ಪ್ರೇಮಿಗಳಿಗೆ]

ನಿನ್ನ ಹೆಗಲೊರಗಿ ಮಲಗಿದ್ದ ಆ ಸಂಜೆ,
ಕತ್ತಲಾಗಿತ್ತೋ,ಕಣ್ಮುಚ್ಚಿದ್ದೆನೊ ತಿಳಿಯದು.
ನಿನ್ನ ಬೆವರ ಹನಿಯೋತುಂತುರು ಮಳೆಯೋ ಕಾಣದು.
ನಿನ್ನ ಸಂಗವೇ ಸುಂದರ ಕನಸು ಅದು.


ಕತ್ತಲೆ ಕರಗಿದಂತೆ ನಾವು ಹೊರಡಲು
ನಿನ್ನ ತುಂಟಾಟಕ್ಕೆ ನಕ್ಕು ತಲೆ ತಗ್ಗಿಸಲು ನಾನು,
ಹಾ!ಪ್ರಿಯ!ಏನೋ ನಿನ್ನ ಆ ನಗು,
ಮರೆತುಹೋದೆ ನನ್ನನ್ನೇ,ಒಂದಾದೆ ಅ ನಗುವಿನಲಿ.

ಇರಬಹುದೇ ಲೋಕ ಪ್ರೀತಿಯಿರದೆ?
ಕ್ಷಣಗಳು ಯುಗಗಳೇ ಆದೀತು ಒಲವಿರದೆ!
ಈ ಕ್ಷಣ ಬರುವುದೇ ಮತ್ತೆ?ಹೇ ಒಲವೆ!
ಬಾ ಸವಿಯುವ ಈ ಕ್ಷಣವಾ!

ಹೇಳುವುದ ಹೇಳಲಾಗದೆ ಸೋತಿಹೆ!
ಭಾಷೆಯದು ಸಾಲ್ವುದೇ ಪ್ರೀತಿಯ ವರ್ಣಿಸುವುದಕೆ?
ಹುಚ್ಚು ಪ್ರಯತ್ನವ ಮಾಡಿರುವೆ
ನಗದೇ ಎನ್ನ ಭಾವವ ಅರ್ಥೈಸಿಕೋ ಪ್ರಿಯ!

ಎಂದೂ ಇರಲಿ ಈ ಕ್ಷಣವೂ,
ಬೇಡ ಆ ಭಾವವಿರದ ಹೊರ ಜಗತ್ತು!
ಹೇ ಸಖ!ಕರೆದೊಯ್ಯಿ ಎನ್ನ ಪ್ರೀತಿಯೇ ಜಗವಾಗಿರುವೆಡೆಗೆ!
ತಾಳಲಾರೆ ಈ ಜಗದ ಜನರ ನಿರ್ಭಾವುಕತೆಯ!

ನಗುವೇ ಅಸ್ತ್ರ ಮಾಡಿ
ಮರುಳ ಮಾಡಿ ಆಚೆಗೇಕೆ
ಕರೆದೊಯ್ಯುವೆ ಎನ್ನ!
ಹಾ!ಕಹಿ ಜಗತ್ತಿಗೆ ಧಿಕ್ಕಾರವಿರಲಿ!



Friday, September 4, 2009

ಅಕ್ಕ

ಇಂದಿರಾ ಇಂದು ಅಮೆರಿಕಾಗೆ ಹೊರಡುತ್ತಾಳೆ.೨ ವರ್ಷದ ಓದಿಗೆ.ಈ ಹಿಂದೆಯೂ ಅವಳು ಕೆಲಸದ ಮೇಲೆ ಹೋಗಿದ್ದಳು.ಆದರೆ ಈ ಸಲ ಮಾತ್ರ ಯಾಕೋ ಬಲು ಬೇಜಾರಾಗ್ತಾ ಇದೆ.೨ ವರ್ಷದವರೆಗೂ ನನಗೆ ಸಂಜೆ ಅಂದರೆ ಸೂರ್ಯಾಸ್ತಮ.ಏಕೆಂದರೆ ಆ ಸೂರ್ಯ ಬೇರೆ ದೇಶಕ್ಕೆ ಬೆಳಕು ಕೊಡಲಿಕ್ಕೊಸ್ಕರ ಹೊರಟಿದೆ.ಈಗಿನ ಆಧುನಿಕ ಜಗತ್ತಿನಲ್ಲಿ ಅಂತರ್ಜಾಲದಿಂದ ಯಾರನ್ನು ಬೇಕಾದರೂ ಸಂಪರ್ಕಿಸ ಬಹುದು ಆದರೆ ವ್ಯಕ್ತಿ ಸಾಕ್ಷಾತ್ತಾಗಿ ಎದುರಿಗೆ ಮಾತಾಡುವಂತೆ ಅವರ ಜೊತೆ ದೂರಸಂಪರ್ಕದಿಂದ ಸಾಧ್ಯ ಇಲ್ಲ.

ಅವಳು ಇದ್ದಾಗ ಎದುರಿಗೆ ಎಲ್ಲ ವಿಷಯವನ್ನು ಮಾತಾಡಿ,ರೇಗಿಸಿ,ಅವಳ ಕೈಲಿ ಬೈಸಿಕೊಳ್ಳುವುದರಲ್ಲಿ ಏನೋ ಒಂದು ತೃಪ್ತಿ ಇರುತ್ತಿತ್ತು.ಪುಸ್ತಕ,ಸ್ನೇಹಿತರು,ತಿಂಡಿ-ತಿನಿಸು,ಹೀಗೆ ಸೂರ್ಯನಡಿ ಇರುವ ಎಲ್ಲ ವಿಷಯವನ್ನೂ ಮಾತಾಡುತ್ತಿದ್ದೆವು.ಅವುಗಳನ್ನೆಲ್ಲ ನಾನು ಈಗ miss ಮಾಡ್ಕೊತೀನಿ.

ಹಾಗಂದ ಮಾತ್ರಕ್ಕೆ ಅವಳು ಹೋಗಬಾರದೆಂದಲ್ಲ.ಆದರೆ ಮನಸ್ಸಿನ ಭಾವನೆಗಳನ್ನು ಹೇಳಿದೆ ಅಷ್ಟೆ.Anyways,all the best ಇಂದಿರಾ.

Thursday, August 13, 2009

ಇಂದಿನ ಈ ದಿನದವರೆಗೂ....

ಬ್ಲಾಗಲ್ಲಿ ಬರೆದು ಹಲವಾರು ದಿನಗಳೇ ಆಗಿ ಹೋದವು.ಬರೆಯಲು ಏನೊಂದೂ ತೋಚುತ್ತಿರಲಿಲ್ಲ.ಹಾಗು ಬದುಕಿನಲ್ಲಿ ಹಲವಾರು ಘಟನೆಗಳು ನಡೆದಿವೆ ಈ ಬರೆಯದೇ ಇರುವ ಕಾಲದಲ್ಲಿ.ಕೆಲವು ಖುಶಿ ವಿಚಾರಗಳು,ಕೆಲವು ಅಹಿತಕರ ಘಟನೆಗಳು.

ಅಹಿತಕರ ಘಟನೆ ನಮ್ಮಮನೆಯ ಒಬ್ಬ ಸದಸ್ಯ ನಮ್ಮನ್ನು ಬಿಟ್ಟು ಬೇರೆಯ ಜೀವನದ ಪಯಣ ನಡೆಸಲು ಹೊರಟರು.ಅವರನ್ನು ಭೇಟಿಯಾಗುವ ಅಥವಾ ಯಾವುದೇ ತರದ ಸಂಪರ್ಕವೂ ಇಲ್ಲ.

ಜೀವನದಲ್ಲಿ ಸಂತೋಷ ನೀಡುವ ಹಲವಾರು ಸಂಗತಿಗಳು ನಡೆದಿವೆ.ಹಲವಾರು.ನನ್ನ ಸ್ನೇಹಿತೆ ನನಗೊಂದು testimonial ಬರೆಯುತ್ತಾಳೆ.ನನಗೊಬ್ಬ ಗುರು ತರಹದ ಓಶೋ ಸಿಗುತ್ತಾನೆ.ಅವನನ್ನು ನನ್ನ ultimate ಗುರು ಅಂತ ನಾನೇನು ಒಪ್ಪಿಲ್ಲ.ಆದರೆ ಸದ್ಯಕ್ಕೆ ನಂಗೊಂದು ದಾರಿ ತೋರಿಸುವನಾಗಿದ್ದಾನೆ.ಅವನನ್ನು ಅರಿಯಲು,ಅವನ ಪುಸ್ತಕವನ್ನು ಕೊಡಲು ಒಬ್ಬ ಸ್ನೇಹಿತನಿದ್ದಾನೆ.ಬಹುಪಾಲು ಪುಸ್ತಕಗಳು ಅವನ ಬಳಿ ಇದೆ.ಇದೊಂದು ನನಗೆ ಬಹು ಖುಷಿ ಕೊಟ್ಟಿರುವ ಸಂಗತಿ.ಮತ್ತೆ ಅವನ ಪ್ರವಚನದ ಸಂಗ್ರಹ ಆನ್ಲೈನ್ ಸಿಕ್ಕಿತು.ಇದೂ ಒಂದು ಸಂತಸದ ಸಂಗತಿ.ನಂತರದಲ್ಲಿ,remembering the shakti ಅನ್ನುವಂತಹ ಬ್ಯಾಂಡ್ ಒಂದರ ಸಂಗೀತವನ್ನು ಕೇಳಿದೆ ಅದ್ಭುತವಾಗಿತ್ತು.ಅದರ ಸದಸ್ಯರಲ್ಲಿ,ಸದ್ಯಕ್ಕೆ ಯು.ಶ್ರೀನಿವಾಸ್,ವಿ.ಸೆಲ್ವ ಗಣೇಶನ್,ಶಂಕರ್ ಮಹಾದೇವನ್ ಮುಂತಾದವರಿದ್ದಾರೆ.ಅದ್ಭುತ ಕಲಾವಿದರು ಇವರೆಲ್ಲ.ಈ ಬ್ಯಾಂಡ ಬಗ್ಗೆ ಗೊತ್ತಾಗಿದ್ದು ಅಕ್ಕನ ಸ್ನೇಹಿತರಿಂದ.ಅವರಿಷ್ಟು ವಿವಿಧ ಪ್ರಕಾರದ ಸಂಗೀತಗಳ ಹಾಡನ್ನ ಕೊಟ್ಟಿದ್ದಾರೆ ಅದರಲ್ಲಿ ಇದೂ ಇತ್ತು.ತಕ್ಷಣ ಇಷ್ಟವಾಯಿತು.

ಇವು ಚಿಕ್ಕವೇ ಆಗಿರಬಹುದು ಆದರೆ ಚಿಕ್ಕ ಚಿಕ್ಕ ಸಂತೋಷ ದೊಡ್ದದಾದಂತಹದ ಒಂದು ಸಂತೋಷಕ್ಕೆ ದಾರಿ ಮಾಡಿ ಕೊಡಬಹುದು .ಚಿಕ್ಕ ಚಿಕ್ಕ ಸಂತೋಷಗಳು ದೊಡ್ಡ ಗಾಯಗಳನ್ನು ವಾಸಿ ಮಾಡುತ್ತವೆ.ಅದರಲ್ಲೂ ಸಂಗೀತದ ನಾದ ಖಂಡಿತವಾಗಲೂ ನೆಮ್ಮದಿಯ ನಿಟ್ಟುಸಿರನ್ನು ಎಲ್ಲವೂ ಶೂನ್ಯ ಎಂಬುವ ಭಾವನೆ ತರಿಸುತ್ತವೆ.ನನಗೆ ಪುಸ್ತಕಗಳು,ಸಂಗೀತದ ಹುಚ್ಚು ಇಲ್ಲದೆ ಇದ್ದಿದ್ದರೆ ನಾನೆಂದೋ ಜೀವನಕ್ಕೆ ಬೆನ್ನು ತೋರಿಸಿ ನನ್ನ ಜೀವನವನ್ನು ನಾಶ ಮಾಡಿಕೊಂಡು ಬಿಡುತ್ತಿದ್ದೆನೇನೋ.ಇವು ಎಷ್ಟು ದಿನ ಇರುತ್ತದೆ ಎನ್ನುವ ಯೋಚನೆ ನನಗಿಲ್ಲ.ಏಕೆಂದರೆ ಇಂದಿನದನ್ನು ಅನುಭವಿಸುವುದು ನನ್ನ ಕೈಲಿರುವುದರಿಂದ ನಾಳೆಯ ಬಗ್ಗೆ ನಮಗೆ ಗೊತ್ತಿಲ್ಲ.

ಹೀಗೆ ಸಂತೋಷ,ದುಃಖ ಎಲ್ಲದರಿಂದ ಕೂಡಿರುವ ಜೀವನ ನಡೆಯುತ್ತಿದೆ.

Friday, May 22, 2009

ಕಲ್ಪಿತ ಪ್ರಪಂಚ

ಬಾಹ್ಯ ಪ್ರಪಂಚದ ಒಡನಾಟ,ಅದರಲ್ಲಿ ಬದುಕುತ್ತಿರುವುದು ಎಷ್ಟು ಸತ್ಯವೋ,ಹಾಗೆ ನಾನು ನನ್ನದೇ ಆದ ಕಲ್ಪಿತ ಪ್ರಪಂಚದಲ್ಲಿ ಬದುಕುತ್ತಿರುವುದು ಅಷ್ಟೆ ಸತ್ಯ.ನಾನು ಬರೆಯುವ ಸಣ್ಣ-ಪುಟ್ಟ ಕಥೆಗಳಲ್ಲಿ ಬರುವ ಪಾತ್ರಗಳು ನನ್ನ ಕಲ್ಪಿತ ಪ್ರಪಂಚದ ಜೀವಂತ ಪಾತ್ರಗಳು.ನನ್ನ ಇನ್ನೊಂದು ಜೀವನದ ಮುಖ್ಯ ವ್ಯಕ್ತಿಗಳು.ಅವರೆಲ್ಲ ನನಗೆ ತೀರ ಹತ್ತಿರದವರು.

ನನಗೆ ಬೇಸರವಾದಾಗ,ಅಳುವಾಗ,ನಗುವಾಗ,ಸಂತೋಷ ಹಂಚಿಕೊಳ್ಳುವಾಗ ನನ್ನ ಭಾವನೆಗಳಿಗೆ ಪ್ರತಿಕ್ರಿಯಿಸುವವರು ಇವರು.ಸರ್ಪನ್,ಸುಖಾಂತ್,ಮನಸ್ವಿನಿ ಅವರಲ್ಲಿ ಕೆಲವರು.ಇವರು ಸಾಮಾನ್ಯ ಮನುಷ್ಯರೇ ಅಂತ ಅನ್ನಿಸಬಹುದು.ಆದರೆ,ನನಗೆ ಇವರು ಅತಿಮುಖ್ಯ ವ್ಯಕ್ತಿಗಳು.ನಮ್ಮ ಮಾತುಗಳನ್ನು ಸದಾ ಆಲಿಸಲು ನಮ್ಮೊಂದಿಗೆ ಯಾರೂ ಇರುವುದಿಲ್ಲ.ಆದರೆ ಇವರು ಮಧ್ಯರಾತ್ರಿಯಲ್ಲಿ ಎದ್ದು ಮಾತನಾಡಿಸಿದರೂ ಉತ್ತರಿಸುತ್ತಾರೆ,ಪ್ರತಿಕ್ರಿಯಿಸುತ್ತಾರೆ.

ಅವರೂ ಮರೆಯಾಗುತ್ತಾರೆ.ನನ್ನೊಡನೆ ನಾನು ಮಾತಾಡಿಕೊಳ್ಳಲೆಂದು.ಅದರಿಂದ ಎಷ್ಟೋ ವಿಷಯಗಳು ಸ್ಫುಟಗೊಳ್ಳುತ್ತವೆ.ತಪ್ಪು-ಒಪ್ಪು ಎಲ್ಲವೂ ತಿಳಿಯುತ್ತದೆ.ಆದರೆ ಬಹುಪಾಲು ಸಮಯದಲ್ಲಿ ಎಲ್ಲರೂ ನನ್ನೊಂದಿಗಿರುತ್ತಾರೆ.ಅವರೂ ಸಾಧಿಸುತ್ತಾರೆ.ಆ ಸಾಧನೆಯನ್ನು ನೋಡಿ ಖುಷಿ ಪಡುತ್ತೇನೆ.

ತಂಗಾಳಿಯಲ್ಲಿ ಸಂಜೆಯ ತಿರುಗಾಟದಲ್ಲಿ,ಎಂತಹ ತಂಗಾಳಿಯಂದರೆ ಮಳೆ ಬರುವ ಮುನ್ನ ತನ್ನೊಂದಿಗೆ ತೇವವನ್ನು ಹೊತ್ತು ತರುವ ತಂಗಾಳಿ.ಆಗ ಮನಸ್ಸಿನ ಭಾವನೆಗಳು ಹೊರಬರುತ್ತವೆ.ಆಗ,ಅವುಗಳನ್ನ ಪದಗಳಲ್ಲಿ ಹೇಳಬಯಸುತ್ತದೆ ಬುಧ್ಧಿ.ಇದರ ಫಲವೇ ಕಲ್ಪಿತ ಪ್ರಪಂಚದ ಬಗೆಗಿನ ಮಾತುಗಳು.ಈ ಪ್ರಪಂಚದಲ್ಲಿ ನಾನು outcaste ಅಲ್ಲ.ಎಲ್ಲರೂ ನನ್ನಪ್ರೀತಿಸುತ್ತಾರೆ.ನನ್ನೊಂದಿಗೆ ಎಲ್ಲವನ್ನು ಹಂಚಿಕೊಳ್ಳುತ್ತಾರೆ.ನನ್ನ ಭಾವನೆಗಲ್ಲನ್ನು ಅರ್ಥ ಮಾಡಿಕೊಳ್ಳುತ್ತಾರೆ.

ನನ್ನ ಕಲ್ಪಿತ ಪ್ರಪಂಚ ನನಗೆ ದೊಡ್ಡ ಆಸ್ತಿ ಇದ್ದ ಹಾಗೆ.ನಾನು ಶ್ರೀಮಂತ.ಎಲ್ಲರೂ ಹೀಗೊಂದು ಕಟ್ಟಿಕೊಂಡಿರುತ್ತಾರೋ ಇಲ್ಲವೊ ನಂಗೆ ಗೊತ್ತಿಲ್ಲ.ಆದರೆ,ನಂಗೆ,ನಾನು ಜೀವಂತವಾಗಿರುವುದಕ್ಕೆ ಈ ಪ್ರಪಂಚದ ವ್ಯಕ್ತಿಗಳೇ ಕಾರಣ.

Wednesday, April 15, 2009

ಮಾತು ಮೌನ

ಇರಿಯುವ ಮಾತು ಕೊಲ್ಲುವ ಮೌನ.ಇದೆರಡರಲ್ಲಿ ನಾನು ಯಾವುದನ್ನು ಆರಿಸಿಕೊಳ್ಳಲಿ?
ಸ್ಮಶಾನ ಮೌನ,ಕುಹಕ ಮಾತು..ಹೀಗಿರುವಾಗ ನಾನೇನು ಮಾಡಲಿ?ಮಾತು,ಮೌನದಾಚೆ ಬೇರೆ ಏನಾದರೂ ಇದೆಯೇ?
....

Thursday, April 9, 2009

ಸುಖಾಂತ್

[ಜೀವನದಲ್ಲಿ ಎಲ್ಲವೂ ನಾವಂದುಕೊಂಡಂತೆ ಆಗುವುದಿಲ್ಲ.ಹಾಗೆಂದ ಮಾತ್ರಕ್ಕೆ ನಾವು ಯಾವುದಕ್ಕೂ ಆಸೆ ಪಡಬಾರದೆಂದಲ್ಲ.ಹಾಗೂ ಜೀವನದಲ್ಲಿ ಭಾವನೆಗಳು,ಆಸೆಗಳು ಬಹುಮುಖ್ಯ ಪಾತ್ರ ವಹಿಸುತ್ತವೆ.ಜೀವಂತವಾಗಿಡುತ್ತವೆ.ಜೀವನ ನೌಕೆ ಮುಂದೆ ಸಾಗಲಿಕ್ಕೆ ಸಹಾಯ ಮಾಡುತ್ತವೆ.ನಾವು ಯಾರನ್ನೋ ಪ್ರೀತಿಸುತ್ತೇವೆ,ಮತ್ತ್ಯಾರನ್ನೋ ತಿರಸ್ಕರಿಸುತ್ತೇವೆ.ಆದರೆ,ಯಾವುದನ್ನೂ ಅವರಿಗೆ ಹೇಳದೆ ಮೌನವಾಗಿರುತ್ತೇವೆ.ಕಾರಣಗಳು ಬಹಳ ಇರುತ್ತವೆ.ಆದರೆ,ಹೇಳಿಬಿಡುವುದೋ?ಬೇಡವೋ? ಹೇಳಿಬಿಟ್ಟರೆ,ನಂತರ ಆಗುವ ಘಟನೆಗೆ ಸಿದ್ಧವಿರುವುದಿಲ್ಲ.ಕೆಲವನ್ನು ಹೇಳುತ್ತೇವೆ,ಕೆಲವನ್ನು ಜೀವನಪೂರ್ತಿ ಹೇಳದೆ ಮುಚ್ಚಿಡುತ್ತೇವೆ.ಏನೇ ಆದರೂ ಜೀವನ ಮುಂದುವರಿಯಲೆಬೇಕಾಗುತ್ತದೆ.]
*******
ಮನಸ್ವಿನಿ:ಹೇ ಸುಖಾಂತ್!ಹೇಗಿದ್ದೀಯ?
ಸುಖಾಂತ್:ನಾನ್ ಆರಾಮ್.ನೀನ್ ಹೇಗಿದ್ದೀ?
ಮನಸ್ವಿನಿ:ನಾನ್ ಕೂಡ ಆರಾಮ್.So,ಏನಾಯ್ತು ನಿನ್ ಪ್ರೇಮ ವಿಷಯ?ಎಲ್ಲಿಗೆ ಬಂತು?
ಸುಖಾಂತ್:ಏನಾಗತ್ತೆ?ಏನೂ ಆಗಿಲ್ಲ.ನಾನು ಅವಳಿಗೆ ಈ ವಿಷಯ ಹೇಳೋಕ್ಕಂತೂ ಸಾಧ್ಯ ಇಲ್ಲ.Its too dangerous.
ಮನಸ್ವಿನಿ:ಯಾಕೆ?ಅವಳೇನು ನಿನ್ನ ಕೊಲೆ ಮಾಡ್ತಾಳ?
ಸುಖಾಂತ್:ಛೆ!ಇಲ್ಲ.ಆದರೆ,ನಂಗೇ ಮನಸಿಲ್ಲ.
ಮನಸ್ವಿನಿ:ಯಾಕೆ?ನೀನವಳನ್ನ ಪ್ರೀತಿಸಲ್ವಾ?
ಸುಖಾಂತ್:ಪ್ರೀತಿಸ್ತೀನಿ.ಹಾಗಂದ ಮಾತ್ರಕ್ಕೆ ಅದನ್ನ ಹೇಳೋಕ್ಕಾಗಲ್ಲ.ಸ್ವಲ್ಪವಾದರೂ ವಿವೇಚನೆ ಇರಬೇಕು ಆಲ್ವಾ?ಸುಮ್ ಸುಮ್ನೆ ಪರಿಚಯವಾದ ಕೆಲವೇ ವರ್ಷಗಳಲ್ಲಿ ಪ್ರೀತಿಸ್ತೀನಿ ಅಂದು ಬಿಟ್ಟರೆ,ಅವಳಾದರೂ ಏನಂದು ಕೊಳ್ಳುವುದಿಲ್ಲ.ಸಲುಗೆಯಿಂದ ಕೆಲವು ಒಳ್ಳೆಯ ಮಾತುಗಳನ್ನ ಆಡಿದ ತಕ್ಷಣ ಇವನೇನು ಹೀಗಾಡ್ತಾ ಇದ್ದಾನೆ ಅಂದ್ಕೊಳಲ್ವಾ?
ಮನಸ್ವಿನಿ:ಪ್ರೀತಿ ಮಾಡೋರೆಲ್ಲ ಹುಟ್ಟಿನಿಂದ ಪರಿಚಿತರಾಗಿರ್ತಾರ?
ಸುಖಾಂತ್:ಹೆಹೆ! ಇಲ್ಲ.ಆದರೆ,ಅವರಿಬ್ಬರಿಗೂ ಮನಸಿರತ್ತೆ.
ಮನಸ್ವಿನಿ :ಅವಳ ಮನಸಲ್ಲೂ ಇರಬಹುದು.
ಸುಖಾಂತ್:ಹಾಗಂತ ನನಗನಿಸಲ್ಲ.ಇದರ ಬಗ್ಗೆ ಅವಳಿಗೆ ಅಂಥಾ ಆಸಕ್ತಿ ಇರೋ ಹಾಗೆ ನಾ ಕಾಣೆ!
ಮನಸ್ವಿನಿ:ಹಾಗಾದ್ರೆ,ಈಗೇನು ಮಾಡ್ತೀಯ?ಹೀಗೆ ಇರ್ತೀಯ?
ಸುಖಾಂತ್:ಮ್......ಗೊತ್ತಿಲ್ಲ.ಇರಬಹುದು.ಪ್ರೀತಿ ಅನ್ನೋದು ತುಂಬಾ ಸೂಕ್ಷ್ಮ.ಅದು ನಾವಂದುಕೊಂಡ್ವಿ ಅಂತ ತತ್ಕ್ಷಣಕ್ಕೆ ಹೆಲಿಬಿದಬಾರದು.ಪ್ರೀತಿ ಆಟ ಅಲ್ಲ.ಒಬ್ಬರಿಗೊಬ್ಬರು ಎಲ್ಲ ರೀತಿಯಲ್ಲೂ ಅಂದ್ರೆ ,ಯೋಚನಾ ರೀತಿ,ಸಿದ್ಧಾಂತ,ಜೀವನದ ಬಗೆಗೆ ಅವರ ಆಲೋಚನೆ,ಬದುಕುವ ರೀತಿ ಎಲ್ಲವೂ ಸೇರತ್ತೆ.ಸೊ,ಪ್ರೀತಿ ಅಂದ್ರೆ ಬರಿಯ ದೈಹಿಕ ಆಕರ್ಷಣೆ ಅಲ್ಲ.ಯಾರೋ ಚೆನ್ನಾಗಿದ್ದರೆ ಅಂತ ಹೋಗಿ "ಪ್ರೀತಿಸ್ತೀನಿ" ಅಂತ ಹೇಳೋದು ಮೂರ್ಖತನ.ಬದುಕಿನಲ್ಲಿ ಪ್ರೀತಿ ಒಂದು ಮುಖ್ಯವಾದ ಭಾಗ.ಕೆಲವರು ಅದರ ಬಗ್ಗೆ ಯೋಚನೆ ಮಾಡ್ತಾರೆ.ಕೆಲವರು ಮಾಡಲ್ಲ.ಹಾಗಂತ,ಅವರಿಗೆ ಪ್ರೀತಿಸುವ ಮನೋಭಾವ ಇಲ್ಲ ಅಂತಲ್ಲ.ಅವರಿಗೆ ಬೇರೆಯ ಆಯ್ಕೆ ಇರುತ್ತದೆ.
ಮನಸ್ವಿನಿ:ಮ್.....ಅಂದ್ರೂ,ಅವಳಿಗೆ ಇದನ್ನ ಕೇಳಿ ನೋಡು,ಸೂಕ್ಷ್ಮವಾಗಿ?
ಸುಖಾಂತ್:ಇಲ್ಲಾ,ನನಗೆ ಅವಳ ಮನಸ್ಸು ಬೇಸರ ಪಡಿಸೋದು ಬೇಕಾಗಿಲ್ಲ.ಆ ಕಾರಣದಿಂದ ಅವಳ ಸ್ನೇಹ ಕಳೆದುಕೊಳ್ಳೋದು ನನಗಿಷ್ಟವಿಲ್ಲ.I let it pass.ನನಗಾ ಒಂದು ಭಾವನೆ ಬಂದಿತ್ತು ಅನ್ನೋದನ್ನೇ ಮರೆತು ಬಿಡ್ತೀನಿ.ನನ್ನ ಜೀವನ ಹಾಗೆ ಮುಂದುವರಿಯುತ್ತೆ.You see,life should move on at any cost.
manaswini:"..........."

Wednesday, January 14, 2009

ನೆನಪುಗಳು

ಕಾಡತ್ತೆ,ಎಂದೂ ನಮ್ಮನ್ನು ಬಿಟ್ಟು ಹೋಗುವುದೇ ಇಲ್ಲ.

ನೆನಪು........

ನೆನಪು ಅಂತ ಕರೀತಾರೆ ಅದನ್ನ.ಸವಿನೆನಪು,ಕಹಿನೆನಪು,ಏನೇ ಆಗಲೀ ಅಂತೂ ನೆನಪಂತೂ ಕಾಡತ್ತೆ.ಆ ಘಟನೆ ನಡೆದಾಗ ಅದೊಂದು ಮರೆಯಲಾಗದ ಸಂಗತಿ ಆಗುತ್ತದೆಂದು ಅಥವಾ ಅದು ನಮ್ಮನ್ನು ಕಾಡುತ್ತದೆ ಎಂದು ಗೊತ್ತಾಗುವುದೇ ಇಲ್ಲ.ಸ್ನೇಹಿತರು,ಸ್ಕೂಲಿನ ಮೇಷ್ಟ್ರುಗಳು.ಹಾ!ನೆನಪುಗಳು ಒತ್ತರಿಸಿಕೊಂಡು ಬರುತಿದೆ.ಮೇಷ್ಟ್ರುಗಳನ್ನು ಅವರ ಶಿಸ್ತು ಕ್ರಮವನ್ನು ತಿರಸ್ಕಾರದ ದೃಷ್ಟಿಯಿಂದ ನೋಡುತ್ತಿದ್ದರೂ ಅವರು ಹಾಗೆ ಮಾಡುವುದಕ್ಕೆ ಹೇಳುತ್ತಿದ್ದ ಕಾರಣವನ್ನು ಕೇಳಿ,ಹೌದು ಅನಿಸುತ್ತಿತ್ತು.ಅನಿಸಿರದಿದ್ದರೂ ಈಗ ಅನಿಸುತ್ತದೆ.ಒಂದು ತರಹದ ಪ್ರೀತಿ,ವಿಶ್ವಾಸಗಳನ್ನು ಬೆಳೆಸಿಕೊಂದಿರುತ್ತಿದ್ದರು ಮೇಷ್ಟ್ರುಗಳು.ಆದರೆ ಯಾವಾಗ ಕಾಲೇಜ್ ನ ಮೆಟ್ಟಿಲು ಹತ್ತಿದೆವೋ ಅಂದಿನಿಂದಲೇ ನಮ್ಮ ದಾರಿ ನಮಗೆ ಎನ್ನುವ ಹಾಗೆ ಆಗಿ ಹೋಯಿತು.ನಮ್ಮನ್ನೆಲ್ಲ ಪ್ರೀತಿಯಿಂದ ಮಾತಾಡಿಸುವ ಗುರು,ನಮ್ಮನ್ನಆತ್ಮೀಯ ದೃಷ್ಟಿಯಿಂದ ನೋಡುತ್ತಿದ್ದ ಸ್ನೇಹಿತರು,ರೇಗಿಸುತ್ತಿದ್ದ ಹುಡುಗಿಯರೂ ಹಾ!ಏಕೆ ಹೀಗೆ ನೆನಪುಗಳು ಕಾಡುತ್ತವೆಎಂದು ಅವರ ಮೇಲೆ ಕೋಪವಾಗಲಿ ಏನೊಂದೂ ಬರುತ್ತಿರಲಿಲ್ಲ ಬದಲಾಗಿ ನಾವೂ ಕೂಡ ರೇಗಿಸುತ್ತಿದ್ದೆವು.ಎಂದೂ ಮನಸ್ತಾಪಗಳು ಅಷ್ಟಾಗಿ ಇರುತ್ತಿರಲಿಲ್ಲ.ಒಬ್ಬನ ತಿಂಡಿಯನ್ನು ನಾವು ಕಿತ್ತು ತಿಂದರೂ ಅವನಿಗಾಗಲಿ ನಮಗಾಗಲಿ ಒಂದಿಷ್ಟೂ ಸಂಕೋಚವಾಗುತ್ತಿರಲಿಲ್ಲ.ಆದರೆ ಈಗ ಮ್ಯಾನರಿಸಂ ಅನ್ನುವ ಹೆಸರಲ್ಲಿ ಆ ನಿಕಟತನವೇ ಹೊರಟು ಹೋಗಿದೆ.ಈಗ ಆ ಪ್ರಶ್ನೆಯೇ ಇಲ್ಲ ಏಕೆ ಅಂದರೆ ಎಲ್ಲರೂ ಹೋಟೆಲ್ನಲ್ಲಿ ಊಟ ಮಾಡೋದು ಆದ್ದರಿಂದ ಒಬ್ಬನ ಡಬ್ಬಿಗೆ ಕೈ ಹಾಕುವ ಪ್ರಸಂಗವೇ ಬರುವುದಿಲ್ಲ.ಹಾ ಎಂತಹ ಗತಿ ಬಂದಿದೆ ನಮಗೆಲ್ಲ.ಈಗ ಎಂತಹ ಉತ್ತಮ ಸ್ನೇಹಿತರಿದ್ದರೂ ಸ್ಕೂಲಿನ ಸ್ನೇಹಿತರಂತೆ,ಆ ಮಟ್ಟಿನ ನಿಕಟತನ ಸಾಧ್ಯವಾಗುವುದಿಲ್ಲ.ಇನ್ನು ಗುರುಗಳನ್ತೂ ನಮ್ಮ ಮೇಷ್ಟ್ರುಗಳಂತೆ ಆಗಲು ಸಾಧ್ಯವೇ ಇಲ್ಲ.ಆ ನಗುಗಳು,ಮಾತು...ಹಾ!ಇನ್ನು ಏನೇನೋ ಕಳೆದುಕೊಂಡಿದ್ದೇವೆ.ಅದನ್ನ ಮರಳಿ ಪಡೆಯಲು ಆಗುತ್ತದೆಯೇ?ನಮಗೆ ಆ ಸಂತೋಷ ತಿರುಗಿ ಸಿಕ್ಕುತ್ತೆಯೇ?ಖಂಡಿತ ನನಗೆ ಗೊತ್ತಿಲ್ಲ.ಆ ದಿನಗಳಲ್ಲಿ ಎಂದೂ ಒಂಟಿ ಎಂದು ಅನಿಸುತ್ತಿರಲಿಲ್ಲ.ಆ ಪದದ ಅರ್ಥವೇ ಗೊತ್ತಿರಲಿಲ್ಲ ಅನಿಸುತ್ತೆ.ಆದರೆ ಈಗ,ಬೇಜಾರು,ಒಂಟಿ ಅನ್ನೋ ಭಾವನೆ ಎಲ್ಲವೂ ಬರುತ್ತವೆ.hehe ಬಾಳು ಎಷ್ಟು ಬದಲಾಗುತ್ತದೆ.ಆದರೆ ಇಷ್ಟೊಂದು ಯಾರು ಯೋಚಿಸುತ್ತಾರೆ?ನಾನೊಬ್ಬನೇ ಹೀಗೇನೆ?ಅಥವಾ ಎಲ್ಲರಿಗೂ ಹೀಗನಿಸುತ್ತದೆಯೇ?ಅಷ್ಟೊಂದು ಯೋಚಿಸುವುದಕ್ಕೆ ಸಮಯವಿದೆಯೇ ಎಲ್ಲರಿಗೂ?ಸಮಯ ಬೇಡ,ವ್ಯವಧಾನ?ಕೆಲವರಿಗೆ ಇದು ಯೋಚಿಸುವ ವಿಷಯವೇ ಅಲ್ಲ ಅನಿಸುತ್ತದೆ.ಆದರೆ,ಆದರೆ,ಓಹ್!ಹೇಗೆ ಹೇಳಲಿ?ಮನಸ್ಸು ತುಂಬಿ ಬರುತ್ತೆ.

ನೆನಪುಗಳನ್ನ ಮರೆಯಲು ಸಾಧ್ಯ ಇಲ್ಲ.ಆದರೆ,ಆ ನೆನಪುಗಳನ್ನು ನೆನೆಸಿಕೊಂಡು ಖುಶಿಪಟ್ಟಿ ಕೊಳ್ಳಬೇಕು.ಸ್ನೇಹಿತರು ಸಿಕ್ಕಿದಾಗ ಆಗುವ ಸಂತೋಷ ಎಲ್ಲೇ ಮೀರುತ್ತೆ.

ನೆನಪುಗಳು ಮಧುರ.ಆದರೆ,ಕಾಡಿದಾಗ ಮಾತ್ರ ಏನೋ ಕಳೆದುಕೊಂಡ ಹಾಗಾಗುತ್ತೆ.
.................................

Thursday, January 1, 2009

"ಕೋಪವೆಂಬುದು ಅನರ್ಥ ಸಾಧನ" ಆದರೆ......

ಕೋಪದಿಂದ ಏನೂ ಸಾಧಿಸಲಾಗುವುದಿಲ್ಲ ಅಂತಾರೆ,ಆದರೆ ಕೋಪ ಅಗ್ನಿಯಂತೆ ಸುಡುತ್ತದೆ,ಉರಿಯುತ್ತೆ ಮೈಯೆಲ್ಲ ಕೋಪದಿಂದ.ವಾತಾವರಣದಲ್ಲಿ ಮೌನವಿದ್ದಾಗ,ಯಾವುದೋ ಒಂದು ಭಾವುಕವಾದ ಹಾಡನ್ನು ಕೇಳುತ್ತಿರುವಾಗ ಕೋಪ ತರಿಸಿದ್ದಂತಹ ಹಿಂದಿನ ಮಾತುಗಳು ಪ್ರಯತ್ನವಿಲ್ಲದೇನೆ ಬಂದುಬಿಡುತ್ತವೆ.ನಾವೇನೂ ತಪ್ಪು ಮಾಡದೆ ಕೂಡ ಒಬ್ಬರಿಂದ ಅನ್ನಿಸಿಕೊಳ್ಳುವುದು ಅವಮಾನಕರ ಸಂಗತಿ.ನಾವು ಎಷ್ಟು ಸರಿಯಾಗಿದ್ದರೂ ಜನರು ಯಾಕೆ ನಮ್ಮನ್ನು ಹಾಗೆ ನಡೆಸಿಕೊಳ್ಳುತ್ತಾರೆ ಎಂಬುದೇ ತಿಳಿಯದ ವಿಷಯ.ಯಾರೋ ಆಡುವ ಮಾತಿಗಳಿಗೆ ಬೇಸರವಾಗುವುದಿಲ್ಲ ಆದರೆ,ಮನೆಯವರೇ ನಮ್ಮನ್ನು ಹೀನಾಯವಾಗಿ ಕಂಡರೆ,ನಮ್ಮ ಯಾವ ಸಂತೋಷವನ್ನೂ ಹಂಚಿಕೊಳ್ಳದೆ,ಅದರಲ್ಲಿ ಹುಳುಕನ್ನೇ ಹುಡುಕಿದರೆ,ಆಗ ಬರುವ ಕೋಪವನ್ನು ತಡೆಯಲಾಗುವುದಿಲ್ಲ.ಎದುರಿಗಿರುವ ಏನನ್ನೋ ಒಡೆದು ಕೋಪಶಮನ ಮಾಡಿಕೋ ಬೇಕನಿಸುತ್ತೆ.ಆದರೆ,ಹಾಗೆ ಮಾಡಲು ಬುದ್ಧಿ ಬಿಡುವುದಿಲ್ಲ.ಬದಲಾಗಿ,ತೊಡೆಯ ಮೇಲೆ ಎರಡು-ಮೂರು ಸಲ ಹೊಡೆದುಕೊಂಡು ಸಮಾಧಾನ ಪಟ್ಟಿಕೊಳ್ಳಬೇಕು.ಆಗಲೇ,ಸ್ವಲ್ಪ ಮಟ್ಟಿಗೆ ಕೋಪ ಇಳಿಯುತ್ತೆ.ಒಂದು ತರಹದ depression ಬಂದು ಬಿಡುತ್ತದೆ.ಎಷ್ಟೇ ನೆಮ್ಮದಿಯಾಗಿರಲು ಪ್ರಯತ್ನಿಸಿದರೂ ಆಗದು.ಒತ್ತಿಕೊಂಡು ಬಂದುಬಿಡುತ್ತೆ ಕೋಪ.ಕೆಲವು ಸಲ,ಮಾತುಗಳು ನೆನಪಾಗಿ ಅಳು ಬರುವ ಹಾಗಾಗುತ್ತೆ.ದುಃಖವಾಗುತ್ತೆ.ಮನಸ್ಸು ಗಾಯಗೊಂಡಿರುತ್ತೆ.

ಕೋಪದಿಂದ ಆಗುವುದು ಏನೂ ಇಲ್ಲ, ಸತ್ಯ.ಆದರೆ,ಕೋಪ ಬಿಟ್ಟು ಇರುವುದಾದರೂ ಹೇಗೆ?ಕೋಪವಿಲ್ಲದೇ ಇರಬೇಕಾದರೆ,ಒಂದು,ಮನುಷ್ಯನ ಸಂಗ ಬಿಡಬೇಕು ಅಥವಾ ಸನ್ಯಾಸಿ ಆಗಿರಬೇಕು,ಅಂದರೆ ನಿರ್ಮೋಹಿಯಾಗಿರಬೇಕು.ಆದರೆ ,ಈ ಎರಡರಲ್ಲೂ ಕೋಪ ಒಂದಲ್ಲ ಒಂದು ರೂಪದಲ್ಲಿ ಇದ್ದೆ ಇರುತ್ತೆ.

ಕೋಪದಿಂದ ಆಗದೇ ಇರುವಂಥದ್ದು ಇಲ್ಲವೇ ಇಲ್ಲ.ಮನುಷ್ಯನ ವಿವೇಚನೆಯನ್ನೇ ಸುಟ್ಟು ಬಿಡುತ್ತದೆ.ಮನಸ್ಸನ್ನು ಕಲಕಿ ಬಿಡುತ್ತದೆ.ಬುದ್ಧಿಯು ಓಡುವುದೇ ಇಲ್ಲ,ಕೋಪ ಬಂದಾಗ.ಒಟ್ಟಿನಲ್ಲಿ,ಕೋಪ ಮನುಷ್ಯ ಇಬ್ಬರೂ ಜೊತೆಯಲ್ಲಿಯೇ ಇರುತ್ತಾರೆ.ಅವರು ಪರಸ್ಪರ ದ್ವೇಷಿಗಳು.ಆದರೂ,ಮನುಷ್ಯ ಕೋಪವನ್ನು ಕೋಪದಿಂದಲೇ ದೂರ ಮಾಡಲು ಯತ್ನಿಸುತ್ತಾನೆ.ಅಲ್ಲಿಗೆ ಕೋಪವಿಲ್ಲದೆ ಕಾರ್ಯವಿಲ್ಲ.ಆದರೆ,"ಕೋಪವೆಂಬುದು ಅನರ್ಥ ಸಾಧನ"........