[ಅರ್ಪಣೆ:ಅವಳಿಗೆ]
ಪ್ರೇಮದ ಓಲೆ ಬರೆಯುವ ಮುನ್ನ,
ಗೆಳತಿ,ನಿನಗೆ ನೂರೊಂದು ಮುತ್ತುಗಳು.
ಒಲವಿನ ಮಾತು ಹೇಳಲಿ ಎಂತು
ಮರೆತೆ ನನ್ನನು ನಾನು.
ನಿನ್ನ ಮುಂಗುರುಳು ನೆನಪಿಸುವುದು ಎನಗೆ,
ಪೂರ್ಣ ಚಂದ್ರನ ಮೇಲಿನ ನೆರಳುಗಳನು.
ನಿನ್ನ ಕೈ ಸ್ಪರ್ಶವದು,ಚಳಿಗಾಲದಿ
ಬೆಚ್ಚನೆಯ ಸೂರ್ಯಕಾಂತಿಯಂತೆ!
ಅದೇನು ಸುಂದರ ನಿನ್ನ ಮೊಗದ ಅಂದ!
ನೋಡುವುದೇ ಬೇಡ ಸಂಜೆ ಸೂರ್ಯನ!
ನಿನ್ನ ಮಡಿಲಲಿ ಮಲಗೆ ನಾನು,
ಮರಳಿ ಆಗುವೆನು ಮಗುವಿನಂತೆ!
ನಿನ್ನ ನಗುವದು,ನಗುವಿಗೆ ಭೂಷಣ,
ದೇವರ ಮೇಲಿನ ಒಡವೆ,ಒಡವೆಗೆ ಭೂಷಣವಾದಂತೆ !
ಎನ್ನ ಭಾಗ್ಯವೋ,ದೇವರ ವರವೋ,
ಬಡವನ ಹೃದಯದ ರಾಣಿಯು ನೀನಾದೆ.
ಈ ಕ್ಷಣದ ಪ್ರೀತಿಯು ಶಾಶ್ವತವೋ ನಾ ಕಾಣೆ,
ಆದರೀ ಅನುಭವ ಬಲು ರೋಮಾಂಚಕ.
ಹೇಳುವುದ ಹೇಳಿದೆನೋ ಇಲ್ಲವೋ,ಒಲವೆ
ಆದರೆ ನಿನಗೆ ನನ್ನ ನೂರೊಂದು ಮುತ್ತುಗಳು!
Subscribe to:
Post Comments (Atom)
No comments:
Post a Comment