"ಮನೆ ಬಿಟ್ಟು ಹೋಗುವ ಸಮಯ ಬಂದಿದೆ.ಹೊರಡ್ತೀನಿ".
ಎಂದು ತನ್ನ ಡೈರಿಯಲ್ಲಿ ಬರೆದು ಮುಚ್ಚಿಡುತ್ತಾಳೆ.ಜೀವನದ ಅತ್ಯಂತ ಮುಖ್ಯವಾದ,ಕಠಿಣವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದಳು.ಕಷ್ಟಗಳನ್ನು,ಅವಮಾನಗಳನ್ನು,ಮನುಷ್ಯ ಒಂದು ಮಟ್ಟದವರೆಗೂ ತಡೆದುಕೊಳ್ಳಬಲ್ಲ.ಮಿತಿ ಮೀರಿದರೆ,ತನ್ನ ಸುತ್ತಮುತ್ತಲಿನವರ ಮೇಲೆ ವಿಚಿತ್ರ ಕೋಪ,ರೋಷ ಮೂಡುತ್ತವೆ.ಆದ್ದರಿಂದ,ದೇವಮನೋಹರಿ ಅಂಥ ನಿರ್ಧಾರವನ್ನು ತೆಗೆದುಕೊಂಡಳು.ಆದರೂ,ಅವಳ ಮನಸ್ಸಿನ ಮೂಲೆಯಲ್ಲೊಂದು ಆಸೆ,ಎಲ್ಲವೂ ಇನ್ನೊಂದು ದಿನದಲಿ ಸರಿಹೋಗಬಹುದೆಂದು,ತಂದೆ-ತಾಯಿಗಳು,ತನ್ನನ್ನು ಅರ್ಥ ಮಾಡಿಕೊಳ್ಳಬಹುದು ಎಂದು.ಆ ಆಸೆ,ನಂಬಿಕೆಯಿಂದಲೇ ಮನುಷ್ಯ ಜೀವನ ಸಾಗಿಸುವುದಲ್ಲವೇ?ಆದರೆ, ಅದೇ ಮನಸ್ಸು,ಇಷ್ಟು ವರ್ಷಗಳು ತನ್ನನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡು,ತಮ್ಮ ಮನಸ್ಸಿಗೆ ತಕ್ಕಂತೆ ಇರಬೇಕೆಂದು ಬಯಸಿದವರಿಗೆ ಒಂದು ದಿನದಲ್ಲಿ ವಿಶ್ವಾಸ ಹುಟ್ಟೀತೆ? ಎಂಬ ಪ್ರಶ್ನೆ.
ಸಂಜೆಯ ವಿಹಾರಕ್ಕೆ ಹೊರಡುವ ಸಮಯ.ಪ್ರಾಣಿಗಳು,ಮನುಷ್ಯರು,ಎಲ್ಲರೂ ತಮ್ಮ ಗೂಡಿಗೆ ಸೇರಿಕೊಳ್ಳುತ್ತಿದ್ದಾರೆ.ನಾಳೆ,ನಾನು ನನ್ನ ಗೂಡನ್ನು ಶಾಶ್ವತವಾಗಿ ಬಿಡುತ್ತೇನೆ,ಇಷ್ಟು ಹೊತ್ತಿಗೆ,ಎಂದುಕೊಳ್ಳುತ್ತಾಳೆ.ದಾರಿಯಲಿ "ಯಾವ ಮೋಹನ ಮುರಳಿ" ಹಾಡು ರೇಡಿಯೋನಲ್ಲಿ ಬರುತ್ತಿರುವುದು ಕೇಳಿಸುತ್ತದೆ.ಅದರ ಕೊನೆಯ ಸಾಲು,"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ".ಜಿಜ್ಞಾಸೆ ಹುಟ್ಟಿತು,ದೇವಮನೋಹರಿಗೆ.ನನ್ನ ಈ ಜೀವನದಲ್ಲಿ ಇರುವುದಾದರೂ ಏನು?ಸುಖವೇ?ಶಾಂತಿಯೇ?ಪ್ರೀತಿ-ವಿಶ್ವಾಸದ ಕುರುಹು ಇಲ್ಲದೆ ಅಪರಿಚಿತರಂತೆ ವರ್ತಿಸುವ ತಂದೆ ತಾಯಿಗಳು.ಅಣ್ಣ-ತಮ್ಮಂದಿರಿಲ್ಲ,aಕ್ಕ-ತಂಗಿಯರಿಲ್ಲ,ಇರುವುದೆಲ್ಲ ತಂದೆ-ತಾಯಿಗಳು.ಆದರೆ,ಎಂಥಾ ದುರಾದೃಷ್ಟ!ಏಕೆ ಹೀಗೆ ಇಂಥ ದಾರುಣ ಪರಿಸ್ಥಿತಿ.ನಾನು ಹೆಣ್ಣು,ದಾರಿ ತಪ್ಪುತ್ತೇನೆ ಎಂದು ಅತಿ ಅಧಿಕಾರವನ್ನು ಸ್ಥಾಪಿಸುತ್ತಿದ್ದಾರೆಯೇ?ಆ ಒಂದು ಅಬಿಪ್ರಾಯ ಬರುವಂತೆ ನಾನೆಂದೂ ನಡೆದುಕೊಂಡಿಲ್ಲ.ಆದರೂ ಎಂಥಾ ಶಿಕ್ಷೆ.ಈ ಮಧ್ಯದಲ್ಲಿ ಸ್ನೇಹಿತರ ಜೊತೆಯೂ ಮಾತಾಡುವಂತಿಲ್ಲ.ಹೀಗಿರುವಾಗ ನಾನು ಯಾವುದನ್ನು ಬಿಟ್ಟು ಹೋಗುತ್ತಿಲ್ಲ. ಅಸಲಿಗೆ ನಂಗೆ ಏನೂ ಇಲ್ಲ,ಎಂದುಕೊಳ್ಳುತ್ತಾಳೆ.
Life is beautiful. ಎಂಬುದನ್ನೂಮಾಡಿಕೊಳ್ಳುವುದೇ ಕಷ್ಟ ಎಂಬುವ ಹಾಗಿತ್ತು ಅವಳ ಯೋಚನಾಲಹರಿ.ಜೀವನದ ಘಟನೆಗಳು,ಅವಳನ್ನು ಹೃದಯಹೀನಳನ್ನಾಗಿ,ಯಾವುದೇ ಆಶೆ-ಆಕಾಂಕ್ಷೆಗಳನ್ನು ಇಟ್ಟುಕೊಳ್ಳದಂತೆ ಮಾಡಿದ್ದವು.ಜಗತ್ತನ್ನು ಪ್ರೀತಿಸುವ ಶಕ್ತಿಯನ್ನು,ಅದು ತನ್ನನ್ನು ಪ್ರೀತಿಸಬಹುದು ಎಂಬ ನಂಬಿಕೆಯನ್ನು ಕಳೆದುಕೊಂಡಿದ್ದಳು.ಹೆತ್ತವರೇ ಹತ್ತಿರವಿಲ್ಲ,ಇನ್ನು ಅಪರಿಚಿತರು ಹೇಗಿರುವರು?ಎಂಬ ಭಯ.ಭಯಗಳೇ ಕಪ್ಪು ಮೋಡಗಳಾಗಿ ಆಕಾಶದಲ್ಲಿ ಮೂಡಿದ್ದವು.ಆ ಕಪ್ಪು ಮೋಡಗಳು,ಆಕಾಶಕ್ಕೆ ಭಾರವಾದಂತೆ,ತೂಗಿ ಬೀಳುವ ಹಾಗೆ ಕಂಡಿತು,ದೇವಮನೋಹರಿಗೆ,ಹೇಗೆ ತನ್ನ ಮನಸ್ಸೂ ಕೂಡ,ಪ್ರಶ್ನೆ,ಅನುಮಾನಗಳಿಂದ ಬಗ್ಗಿ ಬಾಡಿ ತುಗುತ್ತಿದೆಯೋ ಹಾಗೆ.
ಎಂದೂ ವಿರುದ್ಧದ ಕೆಲಸ ಮಾಡಿರದವರಿಗೆ ಭಯ ಆತಂಕಗಳು ಮೂಡುವುದು ಸಹಜ.ದೇವಮನೋಹರಿಗೂ ಆದದ್ದು ಹಾಗೆ.ಮನಸ್ಸಲ್ಲಿ ತುಮುಲ,ಏನೋ ಗೊಂದಲ,ಪ್ರಶ್ನೆ.ತಾನು ಮಾಡುತ್ತಿರುವುದು ಸರಿಯೇ?ಅವರು ತಂದೆ-ತಾಯಿಗಳು.ತನ್ನ ಮೇಲೆ ಅವರಿಗೆ ಅಧಿಕಾರವಿದೆ.ತಾನು ಹೀಗೆ ಮನೆ ಬಿಟ್ಟು ಹೋಗುವುದರಿಂದ,ಅವರಿಗೆ ನೋವಾಗುವುದಿಲ್ಲವೇ?ತಾನವರಿಗೆ ಮಾಡಿರುವುದಾದರೂ ಏನು?ಆದರೆ ಆದರೆ..ನನ್ನ ಗತಿ ಏನು?ನಾನೆಷ್ಟು ಹಿಂಸೆ ಅನುಭವಿಸುತ್ತಿದ್ದೇನೆ.ಪೋಷಕರಾಗಿ ಅವರಿಗೆ ನನ್ನ ಮೇಲೆ ಹಕ್ಕಿದ್ದರೆ,ಮಗಳಾಗಿ ತನಗೆ ಪ್ರೀತಿ-ವಿಶ್ವಾಸವನ್ನು ಅಪೇಕ್ಷಿಸುವ ಅಧಿಕಾರವಿದೆಯಲ್ಲವೇ?ಉಹೂ,ಇನ್ನು ದ್ವಂದ್ವಗಳಲ್ಲಿ ಅರ್ಥವಿಲ್ಲ.ದಾರಿ ಇಲ್ಲಿಗೆ ಮುಗಿದಿದೆ.ತಿರುವು ತೆಗೆದುಕೊಳ್ಳಬೇಕು.ಆ ತಿರುವಲ್ಲಿ ಹೊಸದೇನು ಇಲ್ಲ.ಅದು ಬೇರೆಯ ಜಗತ್ತಿಗೆ ದಾರಿ,ತನ್ನನ್ನು ತಾನು ಕಳೆದುಕೊಳ್ಳುವುದಕ್ಕೆ ದಾರಿ,ಎಂದು ಕೊಂಡು ಮನೆಯಿಂದ ಹೊರಬೀಳುತ್ತಾಳೆ.
ದೂರದ ಊರಿಗೆ ವಾಹನ ಹತ್ತುತ್ತಾಳೆ.ಅದ್ಭುತ ಬೆಳಕು ನೀಡುತ್ತಿರುವ ಸೂರ್ಯ,ಆಹಾರ ಹುಡುಕಾಟದಲ್ಲಿರುವ ಪ್ರಾಣಿ-ಪಕ್ಷಿಗಳು,ಇಳಿಯುವ ಸ್ಥಳದವರೆಗೂ ವಿವಿಧ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಜನರು.ತನಗೆ ಏನೊಂದೂ ದಾರಿ ಇರದೇ ಹೋಯಿತಲ್ಲ ಎಂದುಕೊಳ್ಳುತ್ತಾಳೆ.ಹೆಸರು ತಿಳಿಯದ ದೂರದ ಊರಲ್ಲಿ ಇಳಿಯುತ್ತಾಳೆ.ಇಳಿದವಳೇ ಸುಮ್ಮನೆ ನಡೆಯಲು ಶುರುಮಾಡುತ್ತಾಳೆ.ರಾತ್ರಿ,ಬೆಳಗೂ ನಡೆದು ಯಾವುದೋ ನಿರ್ಜನ ಪ್ರದೇಶಕ್ಕೆ ಬರುತ್ತಾಳೆ.
ಬಾಡಿದ ಮುಖ,ಕೆದರಿದ ಕೂದಲು,ನಿದ್ದೆ ಇಲ್ಲದೆ ಕೆಂಪಾಗಿರುವ ಕಣ್ಣುಗಳು,ಧೂಳಿನ ಬಟ್ಟೆ,ನಿದ್ದೆಯಲ್ಲಿ ನಡೆದಂತೆ ನಡೆಯುತ್ತಿದ್ದಳು.ಎಲ್ಲಿ ಹೋಗುತ್ತಿದ್ದಳೋ ಅವಳಿಗೆ ತಿಳಿಯದು.ಎಲ್ಲೋ ಸುಮ್ಮನೆ ಕೂತು ಅಳುತ್ತಿದ್ದಳು.ರಾತ್ರಿ ಕವಿದಿತ್ತು.ಬೀಸುವ ಗಾಳಿ,ಚುಲ್ಲಿಯಂತೆ ನಕ್ಷತ್ರಗಳು,ಹಾಗೆಯೇ ರಸ್ತೆಯ ಬದಿಯಲ್ಲಿ ಮಲಗುತ್ತಾಳೆ.ಪಯಣಿಗ ಸುಸ್ತಾಗಿದ್ದಾನೆ.ತ್ರಾಣವಿಲ್ಲ.ಮುಂದೆ ಹೋಗುವ ಮನಸ್ಸಿಲ್ಲ.ಹೋದರೂ ಅಲ್ಲಿ ತನಗೆ ಯಾವ ಕೆಲಸವೂ ಇಲ್ಲ.ಮಲಗಿದಲ್ಲೇ ವಿರಮಿಸಿದ.ಲೋಕಕ್ಕೆ ತನಗೆ ಇಷ್ಟು ದಿನ ಆಶ್ರಯ ಕೊಟ್ಟಿದ್ದಕ್ಕೆ ವಂದಿಸಿದ.ಮರಳಿ ಉತ್ತಮವಾದ ಜನ್ಮ ಕೊಡುವಂತೆ ಪ್ರಾರ್ಥಿಸಿದ.ಮುಚ್ಚಿದ ಕಣ್ಣು ಶಾಹ್ಸ್ವತವಾಗಿ ಮುಚ್ಚಿತು.ಕಷ್ಟ ಕೋಟಲೆಗಳು ಅಲ್ಲಿಗೆ ಮುಗಿದವು.ಸರಿ-ತಪ್ಪುಗಳು,ಬುದ್ಧಿವಂತಿಕೆ-ಮೂರ್ಖತನ ಯಾವುದರಿಂದಲೂ ಅಳೆಯಲಾಗದಂಥ ಪರಿಸ್ಥಿತಿ.ಅನಾಥವಾಗಿ ಬದುಕಿದ ಜೀವ,ಅನಾಥವಾಗಿಯೇ ಲೀನವಾಯಿತು.ಅಳುವರಿಲ್ಲ.ಸಂತಾಪವಿಲ್ಲ.ದೇವಮನೋಹರಿ ಪ್ರಕೃತಿಯ ರಾಗಕ್ಕೆ ಸೇರಿಕೊಂಡಳು.ವಂಚಿತ ಹೆಣ್ಣು ಮಗಳು.